ಪಾರ್ಸಿಗಳು
ಪರ್ಷಿಯದವರು. ಇವರನ್ನು ಪಾರಸಿಕರು ಎನ್ನುವುದಿದೆ. ಪರ್ಷಿಯಕ್ಕೆ ಈಗ ಇರಾನ್ ಎಂಬ ಹೆಸರಿರುವುದರಿಂದ ಇವರನ್ನು ಇರಾನಿಗಳೂ ಎಂದು ಕರೆಯುತ್ತಾರೆ. ಇವರ ಪ್ರಾಚೀನ ವಂಶಸ್ಥರೂ ವೇದಕಾಲದ ಆರ್ಯರೂ ಒಂದೇ ಬುಡಕಟ್ಟಿಗೆ ಸೇರಿದವರು. ವೇದಮತ ಸಿಂಧೂಗಂಗಾ ನದಿಗಳ ಮಡಿಲಲ್ಲಿ ಬೆಳೆದು ಬಂದಂತೆ ಇವರ ಪ್ರಾಚೀನ ಮತ ಮತ್ತು ಸಂಸ್ಕøತಿ ಆಧುನಿಕ ಇರಾನ್, ಆಫ್ಘಾನಿಸ್ತಾನ್ ಬಲೂಚಿಸ್ತಾನದ - ಇವುಗಳನ್ನೊಳಗೊಂಡ ಪ್ರಾಚೀನ ಪರ್ಷಿಯದಲ್ಲಿ ಹುಟ್ಟಿ ಬೆಳೆದವು. ಇವು ನಾನಾ ಕಡೆ ಪ್ರಸರಿಸಿ ಯಶಸ್ವಿಯಾಗಿ ಬಾಳಿದ್ದು ಮುಖ್ಯವಾಗಿ ಆಕೇ ಮೆನಿಡೇ ಮತ್ತು ಸಸಾನಿಡೇ ವಂಶಗಳ ರಾಜರ ಕಾಲದಲ್ಲಿ, ಪಾರಸಿಕರು ಅನುಸರಿಸುವ ಜರತುಷ್ಟ್ರ ಮತ ಇರಾಕ್, ಇರಾನ್‍ಗಳ ಪಶ್ಚಿಮೋತ್ತರ ಭಾಗಗಳಲ್ಲಿ ಪ್ರಚಾರದಲ್ಲಿದ್ದಂತೆ ತೋರುತ್ತದೆ. ಇದರ ಪ್ರಭಾವ ವೈದಿಕ ಮತ್ತು ಮಹಾಯಾನ ಬೌದ್ಧ ಮತಗಳ ಮೇಲೆ ಬಿದ್ದಿತೆಂಬುದಕ್ಕೆ ಅನೇಕ ನಿದರ್ಶನಗಳಿವೆ. ಈ ಸಾಂಸ್ಕøತಿಕ ಸಂಬಂಧವನ್ನು ಪರಿಶೀಲಿಸಿದರೆ ಹಲವಾರು ಇರಾನಿಗಳು ವಾಣಿಜ್ಯಾದಿ ವ್ಯವಹಾರಗಳಿಗಾಗಿ ಪ್ರಾಚೀನ ಕಾಲದಲ್ಲೇ ಭರತಖಂಡದ ಪಶ್ಚಿಮ ಭಾಗದ ಪಟ್ಟಣಗಳಲ್ಲಿ ನೆಲೆಸಿದ್ದಿರಬಹುದೆಂದು ತೋರುತ್ತದೆ. ಆದರೆ ಇದನ್ನು ಖಚಿತಪಡಿಸುವುದಕ್ಕೆ ತಕ್ಕಷ್ಟು ಆಧಾರವಿಲ್ಲ.
ಇಸ್ಲಾಂ ಮತ ಸ್ಥಾಪಕನಾದ ಮಹಮದ್ ಪೈಗಂಬರನ ನಾಯಕತ್ವದಲ್ಲಿ ಅರಬ್ಬೀಯರು ಒಂದಾಗಿ, ಎಂಟನೆಯ ಶತಮಾನದಲ್ಲಿ ಪಶ್ಚಿಮ ಏಷ್ಯದ ರಾಷ್ಟ್ರಗಳನ್ನೆಲ್ಲ ಗೆದ್ದು ತಮ್ಮ ಅಧಿಕಾರವನ್ನು ಸ್ಥಾಪಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಇರಾನಿನ ರಾಜ ಮೂರನೆಯ ಯಾಜ್ದೆಗಾರ್ಡ್ ಹಲವಾರು ವರ್ಷ ಅರಬ್ಬೀಯರೊಂದಿಗೆ ಹೋರಾಡಿ ಕೊನೆಗೆ 641ರಲ್ಲಿ ನಡೆದ ನಹಾವಂದ್ ಕಾಳಗದಲ್ಲಿ ಪರಾಜಿತನಾದ. ಇವನೊಡನೆ ಪ್ರಾಚೀನ ಇರಾನೀ ರಾಜರ ಆಧಿಪತ್ಯ ಕೊನೆಗೊಂಡಿತು. ಮೇಲಾಗಿ ಇರಾನೀ ಸಂಸ್ಕøತಿ ಇದ್ದ ಜಾಗ ಕೂಡ ತಿಳಿಯದಂತೆ ಸಂಪೂರ್ಣವಾಗಿ ನಶಿಸಿಹೋಗಿ ಅದರ ಸ್ಥಾನದಲ್ಲಿ ಇಸ್ಲಾಮಿನ ಪ್ರಭಾವ ಬೆಳೆಯಿತು. ಲಕ್ಷೋಪಲಕ್ಷ ಜರತುಷ್ಟ್ರ ಮತಸ್ಥರು ಇದ್ದ ನಾಡಿನಲ್ಲಿ ಇಂದು ಕೇವಲ 10,000 ಮಂದಿ ಮಾತ್ರ ಉಳಿದಿದ್ದಾರೆ. ಇವರು ಇರುವುದು ಇಂದಿನ ಪಾಕಿಸ್ತಾನದ ಸರಹದ್ದಿನಲ್ಲಿ ಓಮನ್ ಕೊಲ್ಲಿ ಹತ್ತಿರ ಇರುವ ಕೆರ್ಮಾನ್ ಪ್ರಾಂತ್ಯದಲ್ಲಿ ಮಧ್ಯ ಇರಾನಿನಲ್ಲಿರುವ ಯೆಜ್ಡ್ ಎಂಬ ಸ್ಥಳದಲ್ಲಿ.

ಈ ಪ್ರಳಯಾಂತಕ ವಿಪತ್ತಿನಿಂದ ಹಲವಾರು ಇರಾನಿಗಳು ತಾಯ್ನಾಡಿನ ಮಮತೆಯನ್ನು ಬಿಟ್ಟು ಮನೆಮಠಗಳನ್ನೆಲ್ಲಾ ತೊರೆದು ತಮ್ಮ ಮತ, ಆಚಾರ, ಸಂಸ್ಕøತಿಗಳ ರಕ್ಷಣೆಯೇ ಮುಖ್ಯವೆಂದು ಭಾವಿಸಿ ದೇಶದೇಶಗಳಲ್ಲಿ ಅಲೆದಾಡಿ ಕೊನೆಗೆ ಭಾರತಕ್ಕೆ ಬಂದು ಸೇರಿದರು. ಇವರ ಪ್ರಥಮ ಪ್ರವೇಶ 716ರಲ್ಲಿ ಎಂದು ಒಂದು ಹಳೆಯ ಅಭಿಪ್ರಾಯವಿದೆ. ಇತ್ತೀಚೆಗೆ ಹೋಡೀವಾಲಾ ಎಂಬ ಪಾರಸಿ ಚರಿತ್ರಾತಜ್ಞ ಈ ಘಟನೆ 936ರಲ್ಲಿ ನಡೆಯಿತೆಂದು ಅಭಿಪ್ರಾಯಪಟ್ಟಿದ್ದಾನೆ. ಶಿಲಾಶಾಸನದ ಆಧಾರದ ಮೇಲೆ 999ರ ಹೊತ್ತಿಗೆ ಇರಾನಿಗಳು ಭಾರತದಲ್ಲಿ ನೆಲೆಸಿದ್ದರೆಂದು ನಿಸ್ಸಂದೇಹವಾಗಿ ಹೇಳಬಹುದು. ಪಾರಸಿ ಸಂಪ್ರದಾಯದ ಪ್ರಕಾರ ಇವರು ಮೊದಲು ಗುಜರಾತಿನಲ್ಲಿರುವ ದೀವ್ ದ್ವೀಪದಲ್ಲಿ ಬಂದಿಳಿದರು. ಕೆಲವು ವರ್ಷಗಳ ಅನಂತರ ಜಾಡಿ ರಾಣಾ ಎಂಬ ರಾಜನ ಅನುಮತಿ ಪಡೆದು ಸಂಜಾನ್ ಎಂಬ ಸ್ಥಳದಲ್ಲಿ ನೆಲೆಸಿದರು. ಇಲ್ಲಿಂದ ಕ್ಯಾಂಬೇ, ಅಂಕ್ಲೇಶ್ವರ್ ಸೂರತ್ ಮತ್ತು ಥಾನಾ ಮುಂತಾದ ಹಲವಾರು ಪಶ್ಚಿಮ ಭಾರತ ಪ್ರದೇಶಗಳಿಗೆ ಪ್ರಸರಿಸಿದರು. ಇವರ ಸಂಬಂಧದ ಒಂದೆರಡು ಚರಿತ್ರಾರ್ಹ ಘಟನೆಗಳುಂಟು. 1305ರಲ್ಲಿ ಮಹಮದೀಯರು ದಂಡೆತ್ತಿ ಬರಲು ಸಂಜಾನಿನ ಪಾರಸಿಕರು ಅಲ್ಲಿಯ ಹಿಂದೂ ರಾಜನಿಗೆ ನೆರವಾದರು. ಮತ್ತೊಂದು ವಿಷಯ, ಮೊಗಲ್ ಸಾರ್ವಭೌಮ ಅಕ್ಬರನಿಗೆ ಅನ್ಯ ಮತಗಳಲ್ಲಿದ್ದ ಆಸಕ್ತಿ ತತ್ವಾನ್ವೇಷಣೆಯಲ್ಲಿದ್ದ ಶ್ರದ್ಧೆ ಭಾರತದ ಚರಿತ್ರೆಯನ್ನರಿತವರಿಗೆಲ್ಲಾ ತಿಳಿದ ವಿಷಯ. ಎಲ್ಲ ಮತಗಳಿಗಿಂತಲೂ ಜರತುಷ್ಟ್ರನ ಮತದಲ್ಲೇ ಅವನಿಗೆ ವಿಶೇಷ ಅದರ, ನಂಬಿಕೆ. ನವಸಾರಿಯ ದಸ್ತೂರ್ ಮೆಹರ್ ಜೀ ರಾಣಾ ಅವನ ಉಪದೇಶಕ. ಮನಃಪರಿವರ್ತನೆಯಾದಾಗ ಅಕ್ಬರ್ ಈ ಮತದ ಮುಖ್ಯ ಲಾಂಛನಗಳಾದ ಸಡ್ರೆ ಮತ್ತು ಕೂಸ್ತೀಗಳನ್ನು ಧರಿಸಿ ಅಗ್ನಿ-ಸೂರ್ಯನ ಪೂಜೆಗೆ ತೊಡಗಿದ್ದ. ಮೇಲಾಗಿ ತನ್ನ ಅರಮನೆಯಲ್ಲಿ ಮಂತ್ರಪುರಸ್ಕಾರವಾಗಿ ಅಗ್ನಿಯನ್ನು ಅವಾಹಿಸಿ ಅವಚ್ಛಿನ್ನವಾಗಿ ಉರಿಯುವಂತೆ ನೋಡಿಕೊಳ್ಳಲು ತನ್ನ ಆತ್ಮಸಖನಾದ ಅಬುಲ್ ಫಜಲನನ್ನು ನಿಯಮಿಸಿದ.

ಪಾರಸಿಕರಿಗೆ ಯೂರೋಪಿಯನರೊಡನೆ ಸಂಬಂಧ ಮೊದಲು ಏರ್ಪಟ್ಟಿದ್ದು ಸೂರತ್ತಿನಲ್ಲಿ. ಇವರು ತಮ್ಮ ಮುಖ್ಯ ಆವಾಸಸ್ಥಾನವಾದ ಬೊಂಬಾಯಿ ನಗರದಲ್ಲಿ 1671ಕ್ಕೆ ಮುಂಚೆಯೇ ನೆಲಸಿದ್ದರೆಂಬುದಕ್ಕೆ ಆಧಾರವಿದೆ. ವ್ಯಾಪಾರ, ಕೈಗಾರಿಕೆಗಳಲ್ಲಿ ಬೊಂಬಾಯಿ ಬೆಳೆದಂತೆಲ್ಲ ಹೆಚ್ಚು ಹೆಚ್ಚು ಮಂದಿ ಪಾರಸಿಕರು ಅಲ್ಲಿ ಹೋಗಿ ನೆಲೆಸಿದರು. ಅಲ್ಪ ಸಂಖ್ಯಾತರಾದರೂ ಕ್ರಮೇಣ ಇಂಗ್ಲಿಷರ ಆಶ್ರಯದಲ್ಲಿ ಬಹಳ ಮುಂದಕ್ಕೆ ಬಂದು ದೇಶದ ಆರ್ಥಿಕ-ರಾಜಕೀಯ ಜೀವನದಲ್ಲಿ ಬಹು ಮುಖ್ಯ ಸ್ಥಾನವನ್ನು ಗಳಿಸಿದರು. ಇವರಲ್ಲಿ ಅತಿವಿಖ್ಯಾತಿಯನ್ನು ಪಡೆದ ಒಬ್ಬಿಬ್ಬರನ್ನು ಮಾತ್ರ ಹೇಳಬಹುದು. ವಾಡಿಯಾ ಮನೆತನದವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ನೂರು ವರ್ಷಗಳಿಗೂ ಹೆಚ್ಚು ಕಾಲ ಹಡಗು ಕಟ್ಟಿಕೊಡುತ್ತಿದ್ದರು. ಅಲ್ಲದೆ ಅವರ ಹಡಗು ಕಟ್ಟೆಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದರು. ತಾತಾ ಮನೆತನದವರು ಭಾರತದ ಕೈಗಾರಿಕೆಯ ಅಂಕುರಾರ್ಹಣೆ ಮಾಡಿದ್ದಲ್ಲದೆ ಕೈಗಾರಿಕೆಯಲ್ಲಿ ಈಗಲೂ ಅಗ್ರೇಸರರಾಗಿದ್ದಾರೆ. ದಾದಾಭಾಯ್ ನವರೋಜಿ ಭಾರತದ ಸ್ವಾತಂತ್ರ್ಯ ಚಳವಳಿಯ ಪಿತಾಮಹನೆಂದು ಪರಿಗಣಿಸಲ್ಪಟ್ಟಿದ್ದಾನೆ. ಸಮಕಾಲೀನ ವಿಜ್ಞಾನಿಗಳಲ್ಲಿ ಭೂಗರ್ಭಶಾಸ್ತ್ರ ಪಂಡಿತ ಡಿ. ಎನ್. ವಾಡಿಯಾ, ಅಣುಶಕ್ತಿ ಇಲಾಖೆಯ ಎಚ್. ಜೆ. ಭಾಭಾ-ಇವರಿಗೆ ಮಾನ್ಯ ಸ್ಥಾನವಿದೆ.

ಭಾರತದಲ್ಲಿ ಪಾರಸಿಕರ ಸಂಖ್ಯೆ 1,00,656 (1961) ದೇಶದ ಒಟ್ಟು ಜನಸಂಖ್ಯೆಯಲ್ಲಿ ಇವರ ಸ್ಥಾನ 0.03. ಪ್ರಪಂಚದ ಒಟ್ಟು ಜರತುಷ್ಟ್ರ ಮತಸ್ಥರಲ್ಲಿ ಸುಮಾರು 90% ಮಂದಿ ಭಾರತದ ಪಾರಸಿಕರು. ಇವರಲ್ಲಿ ಬಹುಮಂದಿ ಬೊಂಬಾಯಿ ನಗರದಲ್ಲಿದ್ದಾರೆ. ಇವರ ಮನೆ ಮಾತು ಗುಜರಾತಿ. ಪಾರಸಿಕರು ಅಗ್ನಿ ಉಪಾಸಕರೆಂದೇ ಪ್ರಸಿದ್ಧಿ. ಇವರ ದೇವಾಲಯದಲ್ಲಿ ಅವಿಚ್ಛಿನ್ನವಾಗಿ ಉರಿಯುವ ಮಂತ್ರ ಪೂತ ಅಗ್ನಿಗೇ ಪೂಜೆ, ಪುರಸ್ಕಾರ. ಉಡ್ವಾಡದಲ್ಲಿರುವ ಇವರ ಗುಡಿಯ ಅಗ್ನಿ 1,300 ವರ್ಷಗಳಿಂದ ಉರಿಯುತ್ತಿದೆ. ಹಿಂದೂಗಳಲ್ಲಿ ಹೇಗೋ ಹಾಗೆ ಇವರ ಗುಡಿಗಳೊಳಗೆ ಇತರ ಮತಸ್ಥರಿಗೆ ಇಂದಿಗೂ ಪ್ರವೇಶವಿಲ್ಲ. ಜರಾತುಷ್ಟ್ರ ಮತದ ಮುಖ್ಯ ಸಂಸ್ಕಾರ ಹಿಂದೂಗಳ ಉಪನಯನವನ್ನು ಹೋಲುವ ನವಜೋತ್. ಏಳರಿಂದ ಹದಿನೈದು ವರ್ಷಗಳೊಳಗಿರುವ ಗಂಡು ಹೆಣ್ಣು ಮಕ್ಕಳೀರ್ವರೂ ಈ ಸಂಸ್ಕಾರಕ್ಕೆ ಅಧಿಕಾರಿಗಳು. ಇದರ ಮುಖ್ಯಾಂಗ ಸದ್ರೆ ಮತ್ತು ಕೂಸ್ತೀ ಧಾರಣ. ಈ ಆಚರಣೆಯ ಅಂತರಾರ್ಥ ಉದಾತ್ತವಾದುದ್ದು. ಸದ್ರೆ ಪದದ ಅರ್ಥ ಸನ್ಮಾರ್ಗ ಕವಚ. ಬಿಳಿ ಮಕ್ಮಲ್ಲಿನಲ್ಲಿ ಹೊಲೆದ ಈ ಅಂಗಿಯನ್ನು ಮೈಗೆ ತಗಲುವಂತೆ ಸರ್ವಕಾಲದಲ್ಲೂ ಧರಿಸಿರುತ್ತಾರೆ. ಕೂಸ್ತೀ ಎಂಬುದು 72 ಎಳೆಗಳುಳ್ಳ ಉಣ್ಣೆಯ ಉಡದಾರ. ಸೊಂಟದ ಸುತ್ತಲೂ ಮೂರು ಸುತ್ತು ಸುತ್ತಿ ಹಿಂದೆಮುಂದೆ ಎರಡೆರಡು ಗಂಟುಗಳನ್ನು ಹಾಕುತ್ತಾರೆ. 72 ಎಳೆಗಳು ಯಜಷೆ ಎಂಬ ಮತಗ್ರಂಥದ 72 ಅಧ್ಯಾಯಗಳ ನೆನಪಿಗಾಗಿ. ಕೂಸ್ತೀಯ ಮೂರು ಸುತ್ತು ಮನುಷ್ಯನಿಗೆ ಮುಖ್ಯವಾಗಿ ಇರಬೇಕಾದ ಮೂರು ಗುಣಗಳನ್ನು ಹೇಳುವುದಕ್ಕಾಗಿ; ಅವು ಯಾವುವೆಂದರೆ ಹೂಮಾತಾ, ಹೂಕುತಾ ಹೂವರಷ್ತಾ (ಸಚ್ಚಿಂತನೆ, ಸದುಕ್ತಿ, ಸದ್ವ್ಯವಹಾರ). ನಾಲ್ಕು ಗಂಟುಗಳ ಅರ್ಥ-ದೇವರು ಒಬ್ಬನೇ ಅವನಿಗೆ ಸಮನಾರೂ ಬೇರೊಬ್ಬರಿಲ್ಲ, ಜರಾತುಷ್ಟ್ರನ ಮತವೇ ಸತ್ಯ, ಅಧರ್ಮವನ್ನು ತ್ಯಜಿಸು, ಧರ್ಮವನ್ನು ಅವಲಂಬಿಸು ಎಂದು. ಜರತುಷ್ಟ್ರ ಮತವನ್ನು ಅನ್ಯಮತಸ್ಥರು ಅವಲಂಬಿಸುವ ಹಾಗಿಲ್ಲ. ಪಾರಸಿಕರಲ್ಲಿ ಅಂತಿಮಸಂಸ್ಕಾರ ಅಪರೂಪ ರೀತಿಯದು. ಇತರ ಜನರಂತೆ ಮೃತದೇಹವನ್ನು ನೆಲದಲ್ಲಿ ಹೂಳುವುದಾಗಲೀ, ಸುಡುವುದಾಗಲೀ, ಹರಿಯುವ ನೀರು ಪಾಲು ಮಾಡುವುದಾಗಲೀ ಇಲ್ಲ. ಇದರಿಂದ ಭೂಮಿ ಅಗ್ನಿ ನೀರು ಅಪವಿತ್ರವಾಗುವುದೆಂದು ನಂಬಿಕೆ. ಆದ್ದರಿಂದ ದೇಹವನ್ನು ಉನ್ನತವಾದ ನಿರ್ಜನ ಸ್ಥಳದಲ್ಲಿ ಬಿಟ್ಟು ಹದ್ದು ಪಾಲು ಮಾಡುತ್ತಾರೆ. ದೊಡ್ಡ ಊರುಗಳಲ್ಲಿ ಶವಸಂಸ್ಕಾರಕ್ಕಾಗಿ ಉನ್ನತ ಗೋಪುರಗಳನ್ನೂ (ಡೋಖ್ಮ) ಕಟ್ಟಿದ್ದಾರೆ.

ಪ್ರಾಚೀನ ಕಾಲದಲ್ಲಿ ಹಿಂದೂಗಳಲ್ಲಿರುವಂತೆ ಪಾರಸಿಕರಲ್ಲೂ ಬ್ರಹ್ಮ, ಕ್ಷತ್ರಿಯ, ವೈಶ್ಯ ಎಂಬ ವರ್ಣಭೇದವಿದ್ದವು. ಈಗ ಪುರೋಹಿತರು (ಅರ್ಥವಾನ್) ಪುರೋಹಿತೇತರರು (ಬಹದ್ದೀನ್) ಎಂಬ ಎರಡು ಪಂಗಡಗಳು ಮಾತ್ರ ಇವೆ. ಇವುಗಳ ಪರಸ್ಪರ ವ್ಯವಹಾರಗಳಲ್ಲಿ ಯಾವ ನಿರ್ಬಂಧವೂ ಇಲ್ಲ ಪೌರೋಹಿತ್ಯವನ್ನು ಮಾತ್ರ ಅರ್ಥವಾನರೇ ಮಾಡಬೇಕು. ಈ ವ್ಯತ್ಯಾಸವಿಲ್ಲದೆ ಕಳೆದ 300ವರ್ಷಗಳಿಂದ ಶೆನ್‍ಶಾಹೀ ಮತ್ತು ಕದ್ಮೀ ಎಂಬ ಹೊಸ ಪಂಗಡಗಳು ಹುಟ್ಟಿವೆ. ಪಂಚಾಂಗ ವಿಷಯದಲ್ಲಿ ಮತಭೇದವೇ ಇದಕ್ಕೆ ಆಧಾರ. ವೇಷ ಭೂಷಣ, ಆಚಾರ, ವ್ಯವಹಾರಗಳಲ್ಲಿ ಒಟ್ಟಿನಲ್ಲಿ ಪಾರಸಿಕರು ಹಿಂದೂಗಳಂತೆಯೇ ವರ್ತಿಸುತ್ತಾರೆ. ಆದರೆ ಬಹುಕಾಲ ನಗರವಾಸಿಗಳಾದ್ದರಿಂದಲೂ ಯೂರೋಪಿನವರೊಡನೆ ಹೆಚ್ಚಿನ ಸಂಬಂಧ ಏರ್ಪಟ್ಟಿದ್ದರಿಂದಲೂ ಇವರು ಇತರ ಜಾತಿಯವರಿಗಿಂತ ಯೂರೋಪಿಯನ್ನರ ಆಚಾರ ವ್ಯವಹಾರಗಳನ್ನು ಸ್ವಲ್ಪ ಹೆಚ್ಚು ಅವಲಂಬಿಸಿದ್ದಾರೆ. ಇತರ ಮತಾವಲಂಬಿಗಳಿಗಿಂತಲೂ ಎಲ್ಲ ವಿಷಯಗಳಲ್ಲೂ ಹೆಚ್ಚು ಮುಂದುವರಿದಿದ್ದಾರೆ.								(ಎಸ್.ವಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ